Friday, January 1, 2010

ಮಂಗಳೂರಿನಿಂದ - ಮಂಗಳೂರಿಗೆ!


ಮಂಗಳೂರು - ಮಂಗಳೂರು (ನಡುವಿನ ಪ್ರವಾಸ ಕಥೆ) ೧೯-೧೨-2009

ಸರಿ ಸುಮಾರು ಎರಡು ತಿಂಗಳಿನಿಂದ ಅಂದು ಕೊಂಡಿದ್ದ ಪಯಣದ ಯೋಜನೆ ಕೊನೆಗೂ ಕಾರ್ಯ ಪ್ರವೃತ್ತವಾಗುವ ಹಂತ ತಲುಪಿತ್ತು, ಅದು ೧೯ ನೆಯ ತಾರೀಕು ಶನಿವಾರ ಎಂಟು ಗಂಟೆ ನಲವತ್ತು ನಿಮಿಷ ಮಂಗಳೂರಿನ ಪ್ರಧಾನ ರೈಲ್ವೆ ನಿಲ್ಧಾಣದಿಂದ ಹೊರಟ ಚುಕು ಬುಕು ರೈಲು ಗಾಡಿ, ಅರುಣ್, ಮಧು, ಹಾಗೂ ನಾಗೇ೦ದ್ರನನ್ನು ಹೊತ್ತು ಕೊಂಡು ತನ್ನ ಗಮ್ಯ ಸ್ಥಳವಾದ "ಯಶವಂತಪುರ ರೈಲು ನಿಲ್ಧಾಣ" ಇಲ್ಲಿಗೆ ಹೊರಟೇ ಬಿಟ್ಟಿತು! ಅರುಣ್

ಎರಡು ತಿಂಗಳ ಹಿಂದೆ :-

ಹೇಯ್ ನಾವೆಲ್ಲರೂ ಎಲ್ಲಾದರೂ ದೂರ ಹೋಗಿ ಬರೋಣವೇ? ಇಂತಹ ಒಂದು ಪ್ರಸ್ತಾವನೆ ಮುಂದಿಟ್ಟವನು "ಅರುಣ್" ಸರಿ ಹೋಗೋಣ ಎಂದವರು ಕನಿಷ್ಠ ೯ ಸ್ನೇಹಿತರು!!! ಆಯ್ತು ನೋಡಿ ಇಲ್ಲಿಂದ ಪ್ರವಾಸಿ ತಾಣಗಳ ಹುಡುಕಾಟ! ಕರ್ನಾಟಕದ ನಕ್ಷೆಯನ್ನು ಹಿಡಿದು ಎಲ್ಲಿಗೆಲ್ಲ ಸವಾರಿ ಬೆಳೆಸ ಬಹುದು ಎನ್ನುವುದರ ಬಗ್ಗೆ ದೀರ್ಘ ಚಿಂತನೆ. ಕೊನೆಗೂ ಒಂದು ಕರಡು ಪ್ರತಿ ಸಿದ್ದವಾಯ್ತು! ಬಹಳ ಉದ್ದವಾದ ಪಟ್ಟಿಯೇ ಸಿದ್ದವಾಗಿತ್ತು. ಮಂಗಳೂರಿನಿಂದ ಹೊರಟು ಮೈಸೂರು, ಬೆಂಗಳೂರು, ಹಂಪಿ, ಪಟ್ಟದಕಲ್ಲು, ಐಹೊಳೆ, ಬಾದಾಮಿ, ಬಿಜಾಪುರ್, ಬೆಳಗಾಂ, ಕುಮಟಾ, ಗೋಕರ್ಣ, ಓಂ ಬೀಚ್ ಕೊನೆಗೆ ಮನೆಗೆ!!!!

ಅರುಣ್, ನಾಗ, ಮಧು, ಬಿಟ್ಟಿ, ನಿತಿನ್, ಅಜ್ಜು, ಜೀವನ್, ವಿಜಯ ಚಂದ್ರ, ಶ್ರೀನಿಧಿ, ಅವಿನಾಶ್, ರವಿಯಣ್ಣ ಇಷ್ಟೊಂದು ಜನ ಹೊರಡೋದು ಎಂದು ತೀರ್ಮಾನವಾಯಿತು. ಅನಿವಾರ್ಯ ಕಾರಣಗಳಿಂದ ಕೊನೆಗೆ ಪಯಣಕ್ಕೆ ಹೆಜ್ಜೆ ಇಟ್ಟಿದ್ದು ಕೇವಲ ಮೂರೇ ಮೂರು ಜನ! ಅದೇನೇ ಇರಲಿ ಶನಿವಾರ ೧೯ನೆಯ ೨೦೦೯ರಂದು ದಂಡಯಾತ್ರೆ ಶುರುವಾಯಿತು.

ಮೂರು ಜನ! ಹತ್ತು ದಿನ! ( ಪ್ರವಾಸ ೫ ರಿಂದ ೭ ದಿನಗಳದ್ದು ಎಂದು ತೀರ್ಮಾನವಾಗಿತ್ತು) ಆದರೆ ಸ್ಥಳಗಳಲ್ಲಿ ಸ್ವಲ್ಪ ಬದಲಾವಣೆ. ಅದರ ವಿವರಣೆ ಮುಂದೆ ಇದೆ...



ಅದೊಂದು ಅದ್ಭುತ ಅನುಭವ! ಹೌದು ರೈಲು ಗಾಡಿಯು ಮಂಗಳೂರನ್ನು ಬಿಟ್ಟು ಹೊರಟ ಕ್ಷಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ನಮ್ಮ ಮುಂದಿರುವ ಪ್ರಯಾಣದ ರೋಚಕತೆಯು ಹೇಗಿರ ಬಹುದು ಎನ್ನುವುದರ ಕಲ್ಪನೆಯಲ್ಲೇ ಸಾಗಿದ ಮನಸ್ಸು, ದಾರಿಯ ನಡುವೆ ನಮ್ಮೆದುರು ತೆರೆದು ಕೊಂಡ ಲೋಕವನ್ನು ಬೆರಗು ಕಣ್ಣುಗಳಿಂದಲೇ ಸ್ವಾಗತಿಸುತ್ತಿತ್ತು, ಆನಂದಿಸುತ್ತಿತ್ತು.

ಮೊದಲ ದಿನದ ಪ್ರಯಾಣ ಸುಖವಾಗಿ ಸಾಗಿ ತನ್ನ ಗಮ್ಯ ಸೇರುವಲ್ಲಿ ಯಶಸ್ವಿಯಾಗಿತ್ತು. ಬೆಂಗಳೂರು! ಸಮಯ ರಾತ್ರಿ ೭:೩೦, ಹೇಳಿ ಕೊಳ್ಳುವಂತಹ ಚಳಿ ಏನೂ ಇರದಿದ್ದರೂ ಸ್ವಲ್ಪ ಚುಮು ಚುಮು ಚಳಿ ಗಾಳಿಯು ತನ್ನ ಇರವನ್ನು ಸಮರ್ಥಿಸಿ ಕೊಳ್ಳುತ್ತಲೇ ಇತ್ತು!

ಈಗ ರವಿಯನ್ನು ಹುಡುಕಬೇಕು! ಹೌದು ನಮ್ಮ ಬರುವಿಕೆಯನ್ನು ಸಂಶಯಾಸ್ಪದವಾಗಿ ಕಾಯುತ್ತಿದ್ದ ನಮ್ಮ ಸ್ನೇಹಿತ "ರವಿ". ಮೊಬೈಲ್ ಕರೆ ಸ್ವೀಕರಿಸಿದ ನಂತರವೇ ನಾವು ಬಂದಿರುವುದನ್ನು ಖಚಿತ ಪಡಿಸಿಕೊಂಡು ತನ್ನ ಮನೆಗೆ ಬರುವ ಹಾದಿ ಹೇಗೆ ಎಂದು ಹೇಳಿ ಕೊಟ್ಟ.

ಕೋರಮಂಗಲ ಇಲ್ಲಿ ಫೋರಂ ಅನ್ನೋ ಶಾಪಿಂಗ್ ಮಾಲ್ ನ ಎದುರು ಕಾಯುವಂತೆ ನಮಗೆ ನಿರ್ದೇಶಿಸಿದ ಆಸಾಮಿ ಕೊನೆಗೂ ಎದುರು ಪ್ರತ್ಯಕ್ಷನಾದ. ಅಲ್ಲಿಂದ ೨ ಕಿಲೋ ಮೀಟರ್ ನಡೆದುಕೊಂಡು ಮನೆ ಸೇರಿದೆವು. ಅರುಣ್ ಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು, ರವಿ ಜೊತೆ ಅರುಣ್ ನ ಹಳೆಯ ಗೆಳೆಯ ನಿತೇಶ್ ಕೂಡ ಇದ್ದ. ಬಹಳ ಸಂತೋಷದಿಂದ ಇಬ್ಬರೂ ಹಳೆಯ ನೆನಪುಗಳನ್ನು ಕೆದಕಿ ಖುಷಿ ಪಟ್ಟರು. ಅದೇ ಮನೆಯ ಹತ್ತಿರ ಅರುಣ್ ನ ಇನ್ನೊಬ್ಬ ಹಳೆಯ ಖಾಸಾ ಗೆಳೆಯ ಶಿವಲಾಲ್ ಕೂಡ ವಾಸವಾಗಿರುವುದು ಗೊತ್ತಿದ್ದ ಕಾರಣ ಅವನನ್ನೂ ನೋಡಿ ಬರಲೆಂದು ಅಲ್ಲಿಗೆ ಹೆಜ್ಜೆ ಹಾಕಿದನು! ಆ ರಾತ್ರಿ ಆರೂ ಜನ ಸೇರಿ ಕೊಂಡು ಭರ್ಜರಿ ಭೋಜನ ಮಾಡಿ, ಹಳೆಯ ಸ್ನೇಹಿತರನ್ನು ನೆನೆಸಿಕೊಂಡು, ಕೆಲವರಿಗೆ ಫೋನ್ ಮಾಡಿ ಕಾಟ ಕೊಟ್ಟು, ಹಾಗೂ ಹೀಗೂ ನಿದ್ದೆಗೆ ಜಾರಿದರು.




ಪಯಣ ಮುಂದುವರೆಸುತ್ತ ಚಿತ್ರದುರ್ಗಕ್ಕೆ...............


1 comment: